Neer Dose Karnataka
Take a fresh look at your lifestyle.

ಕಹಿಯಾಗಿ ಅಲ್ಲದೆ ರುಚಿಯಾಗಿ ಹಾಗಲಕಾಯಿ ಪಲ್ಯ ಮಾಡಿರಿ ಹೇಗೆ ಗೊತ್ತೇ??ವಿಡಿಯೋ ಸಮೇತ ವಿವರಣೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಕಹಿ ಇಲ್ಲದ ಹಾಗೆ ಹಾಗಲಕಾಯಿ ಪಲ್ಯ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹಾಗಲಕಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು: 300 ಗ್ರಾಂ ಹಾಗಲಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಒಂದೂವರೆ ಚಮಚ ಜೀರಿಗೆ, ಅರ್ಧ ಚಮಚ ಮೆಂತ್ಯ, 3 ಚಮಚ ಬಿಳಿ ಎಳ್ಳು, ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, ಒಂದು ಈರುಳ್ಳಿ,10 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, 1 ಟೊಮೇಟೊ, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಧನಿಯಾ ಪುಡಿ,1 ಚಮಚ ಅಚ್ಚಖಾರದ ಪುಡಿ, ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು, ಸ್ವಲ್ಪ ಕೊತ್ತಂಬರಿ ಸೊಪ್ಪು.

ಹಾಗಲಕಾಯಿ ಪಲ್ಯ ಮಾಡುವ ವಿಧಾನ: ಮೊದಲಿಗೆ ಹಾಗಲಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ನಂತರ ಅದರಲ್ಲಿರುವ ಬೀಜಗಳನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. 10 ನಿಮಿಷಗಳ ನಂತರ ಹಾಗಲಕಾಯಿಯಲ್ಲಿರುವ ನೀರನ್ನು ಹಿಂಡಿಕೊಂಡು ಹಾಗಲಕಾಯಿಯನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚ ಜೀರಿಗೆ, ಅರ್ಧ ಚಮಚ ಮೆಂತ್ಯ, 3 ಚಮಚ ಬಿಳಿ ಎಳ್ಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಪಕ್ಕಕ್ಕಿಡಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಹಾಗಲಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಎಣ್ಣೆಯಿಂದ ತೆಗೆದು ಒಂದು ಬಟ್ಟಲಿಗೆ ಹಾಕಿಕೊಂಡು ಪಕ್ಕಕ್ಕಿಡಿ. ನಂತರ ಅದೇ ಬಾಣಲಿಗೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಉದ್ದನೆ ಹಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಟೊಮೊಟೊವನ್ನು ಹಾಕಿ ಫ್ರೈ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 – 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ನಂತರ ಅರ್ಧ ಚಮಚದಷ್ಟು ಅರಿಶಿನ ಪುಡಿ, ಅರ್ಧ ಚಮಚ ಧನಿಯಾ ಪುಡಿ, 1 ಚಮಚ ಅಚ್ಚ ಖಾರದ ಪುಡಿ ಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಫ್ರೈ ಮಾಡಿಕೊಂಡ ಹಾಗಲಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹಿಂದೆ ಪುಡಿಮಾಡಿಕೊಂಡ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿದ ಹುಣಸೆ ಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 3 – 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯದಾಗಿ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಕಹಿ ಇಲ್ಲದ ಹಾಗೆ ಹಾಗಲಕಾಯಿ ಪಲ್ಯ ಸವಿಯಲು ಸಿದ್ಧ.

Comments are closed.