Neer Dose Karnataka
Take a fresh look at your lifestyle.

ಅತೀ ಕಡಿಮೆ ಸಮಯದಲ್ಲಿ ಕುಕ್ಕರ್ ನಲ್ಲಿ ಸಿದ್ಧವಾಗುವ ರುಚಿಕರವಾದ ಎಗ್ ಬಿರಿಯಾನಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಅತೀ ಕಡಿಮೆ ಸಮಯದಲ್ಲಿ ಕುಕ್ಕರ್ ನಲ್ಲಿ ಮಾಡುವ ರುಚಿಕರವಾದ ಎಗ್ ಬಿರಿಯಾನಿ ರೆಸಿಪಿಯನ್ನು ನಿಮಗೆ ತಿಳಿಸಲಾಗಿದೆ. ಎಗ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು: 4 ಬೇಯಿಸಿದ ಮೊಟ್ಟೆ, ಸ್ವಲ್ಪ ಎಣ್ಣೆ, ಒಂದೂವರೆ ಚಮಚ ಅಚ್ಚ ಖಾರದ ಪುಡಿ, ಒಂದೂವರೆ ಚಮಚ ಅರಿಶಿಣ ಪುಡಿ, ಒಂದೂವರೆ ಚಮಚ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, 2 ಇಂಚಿನಷ್ಟು ಚಕ್ಕೆ, 2 ಲವಂಗ, 2 ಸ್ಟಾರ್ ಹೂವು, 1 ಏಲಕ್ಕಿ, 1 ಚಮಚದಷ್ಟು ಕಸೂರಿ ಮೇತಿ, 2 ಪಲಾವ್ ಎಲೆ, ಸ್ವಲ್ಪ ಹಸಿಮೆಣಸಿನಕಾಯಿ, 2 ಈರುಳ್ಳಿ, ಒಂದುವರೆ ಚಮಚದಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3 ಟೊಮೇಟೊ, 1 ಬಟ್ಟಲು ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, 1 ಬಟ್ಟಲು ಪುದೀನಾ ಸೊಪ್ಪು, 1 ಚಮಚ ಧನಿಯಾ ಪುಡಿ, 1 ಲೋಟ ಅಕ್ಕಿ.

ಎಗ್ ಬಿರಿಯಾನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅರ್ಧ ಚಮಚದಷ್ಟು ಅಚ್ಚಖಾರದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, ಅರ್ಧ ಚಮಚ ಗರಂ ಮಸಾಲ, ಸ್ವಲ್ಪ ಉಪ್ಪನ್ನು ಹಾಕಿ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡ ಮೊಟ್ಟೆಯನ್ನು ಹಾಕಿ ಮೊಟ್ಟೆಗೆ ಮಸಾಲೆ ಅಂಟಿಕೊಳ್ಳುವವರೆಗೂ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಕುಕ್ಕರಿಗೆ 2 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ 2 ಚಕ್ಕೆ, 2 ಲವಂಗ, 2 ಸ್ಟಾರ್ ಹೂವು, 1 ಏಲಕ್ಕಿ, 1 ಚಮಚ ಕಸೂರಿ ಮೇತಿ, 2 ಪಲಾವ್ ಎಲೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದುವರೆ ಚಮಚದಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮ್ಯಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಬಟ್ಟಲಿನಷ್ಟು ಪುದೀನಾ ಸೊಪ್ಪು, ಅರ್ಧ ಬಟ್ಟಲಿನಷ್ಟು ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪುಡಿ, 1 ಚಮಚ ಧನಿಯಾ ಪುಡಿ, 1 ಚಮಚ ಗರಂ ಮಸಾಲ, 1 ಚಮಚ ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಅಕ್ಕಿ ತೆಗೆದುಕೊಂಡ ಅಳತೆಯ ಲೋಟದಲ್ಲಿ ಎರಡು ಲೋಟ ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 1 ಲೋಟದಷ್ಟು ತೊಳೆದ ಅಕ್ಕಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಬಟ್ಟಲು ಪುದೀನಾ ಸೊಪ್ಪು, ಅರ್ಧಬಟ್ಟಲು ಕೊತ್ತಂಬರಿಸೊಪ್ಪುನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ ಫ್ರೈ ಮಾಡಿಕೊಂಡ ಮೊಟ್ಟೆಯನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಎರಡು ವಿಷಲ್ ಹಾಕಿಸಿಕೊಂಡರೆ ಎಗ್ ಬಿರಿಯಾನಿ ಸವಿಯಲು ಸಿದ್ಧ.

Comments are closed.