Neer Dose Karnataka
Take a fresh look at your lifestyle.

ಸಾಕ್ಷಾತ್ ಕೃಷ್ಣನೇ ನಿರ್ಮಾಣ ಮಾಡಿದ ದ್ವಾರಕಾ ನಗರ ಹೇಗೆ ಮುಳುಗಿತು ಗೊತ್ತೇ?? ಸಮುದ್ರಲ್ಲಿ ಮುಳುಗಿರುವ ದ್ವಾರಕೆಯ ಕಥೆಯೇನು ಗೊತ್ತೇ?

ಶ್ರೀಕೃಷ್ಣ ಒಬ್ಬ ಪುರಾಣ ಪುರುಷ, ಭಗವದ್ಗೀತೆಯ ಪ್ರಕಾರ ಶ್ರೀಕೃಷ್ಣ ದೇವಪುರುಷರಾಗಿದ್ದರು. ಇವರು ಬೋಧಿಸಿರುವ ಭಗವದ್ಗೀತೆ ಈಗಲೂ ಜನರ ವ್ಯಕ್ತಿ ವಿಕಸನಕ್ಕೆ ಉಪಯೋಗಕ್ಕೆ ಬರುತ್ತಿದೆ. ಶ್ರೀಕೃಷ್ಣ ಇಲ್ಲದೆ ಮಹಾಭಾರತ ಇಲ್ಲ, ಶ್ರೀಕೃಷ್ಣ ಇಲ್ಲದೆ ಕುರುಕ್ಷೇತ್ರ ಯುದ್ಧ ಇಲ್ಲ, ಶ್ರೀಕೃಷ್ಣ ಇಲ್ಲದೆ ಭಗವದ್ಗೀತೆ ಇಲ್ಲ. ಕುರುಕ್ಷೇತ್ರ ಯುದ್ಧ ನಡೆಯುವ ಮೊದಲು ಅರ್ಜುನನಿಗೆ ಶ್ರೀಕೃಷ್ಣ ಮಾಡಿದ ಬೋಧನೆಯೇ ಭಗವದ್ಗೀತೆ. ಈ ಗ್ರಂಥವು ಈಗಲೂ ಜನರನ್ನು ಸರಿದಾರಿಗೆ ಹೋಗಲು ಸಹಾಯ ಮಾಡುತ್ತಿದೆ. ಇನ್ನು ಶ್ರೀಕೃಷ್ಣ ಬೆಳೆಸಿದ ಊರು ದ್ವಾರಕ, ಈಗಲೂ ಸಹ ಗುಜರಾತ್ ಸಮೀಪದ ನೀರಿನ ಒಳಗೆ ದ್ವಾರಕಾ ನಗರ ಮುಳುಗಿ ಹೋಗಿದೆ ಎಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಅವಾಶೇಷಗಳು ಸಹ ಸಿಕ್ಕಿವೆ ಎಂದು ಹೇಳುತ್ತಾರೆ. ಹಾಗಿದ್ದರೆ, ದ್ವಾರಕ ನಗರ ನೀರಿನಲ್ಲಿ ಮುಳುಗಿದ್ದು ಹೇಗೆ? ಆ ರೀತಿ ನಡೆದದ್ದು ಯಾಕೆ? ಇಂದು ಈ ವಿಚಾರಗಳನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

ಶ್ರೀಕೃಷ್ಣ ಹುಟ್ಟಿದ್ದು ಮಥುರಾನಲ್ಲಿ, ಬೆಳೆದದ್ದು ಗೋಕುಲದಲ್ಲಿ, ಶ್ರೀಕೃಷ್ಣ ಬೆಳೆಸಿದ ಊರು ದ್ವಾರಕಾ. ಶ್ರೀಕೃಷ್ಣನು ತನ್ನ ಸೋದರ ಮಾವ ಕಂಸನ ಸಂಹಾರ ಮಾಡಿದ ನಂತರ ಜರಾಸಂಧ ಒಂದು ಶಪತ ಮಾಡುತ್ತಾನೆ, ಶ್ರೀಕೃಷ್ಣನನ್ನು ಹಾಗೂ ಯದುವಂಶವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅವಕಾಶ ಸಿಕ್ಕಾಗಲೆಲ್ಲಾ ಮಥುರಾ ಮೇಲೆ ಯುದ್ಧಕ್ಕೆ ಬಂದು, ಅಲ್ಲಿ ತನ್ನ ಆಕ್ರೋಶವನ್ನು ಪ್ರದರ್ಶನ ಮಾಡುತ್ತಿದ್ದನು. ಹಾಗಾಗಿ ಶ್ರೀಕೃಷ್ಣನು ಸಮುದ್ರ ತೀರದಲ್ಲಿ ದ್ವಾರಕಾ ನಗರವನ್ನು ನಿರ್ಮಿಸಿ ಅಲ್ಲಿ, ಯದು ವಂಶದವರ ಜೊತೆ ಶಾಂತಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದನು. ಹಲವು ವರ್ಷಗಳ ಕಾಲ ದ್ವಾರಕಾ ನಗರವನ್ನು ಬೆಳೆಸಿದ ಶ್ರೀಕೃಷ್ಣನು, ತನ್ನ ದೇಹತ್ಯಾಗ ಮಾಡಿದ ನಂತರ, ದ್ವಾರಕಾ ನಗರ ಸಹ ನೀರಿನಲ್ಲಿ ಮುಳುಗಿ ಹೋಯಿತು ಎಂದು ಹೇಳುತ್ತಾರೆ. ಇದಕ್ಕೆ ಕಾರಣ ತಿಳಿಸಲು ಎರಡು ಕಥೆಗಳಿವೆ.

ಮೊದಲನೆಯದು ಗಾಂಧಾರಿ ಶ್ರೀಕೃಷ್ಣನಿಗೆ ನೀಡಿದ ಶಾಪ, ಎರಡನೆಯದು ಶ್ರೀಕೃಷ್ಣನ ಮಗನಿಗೆ ಋಷಿಗಳಿಂದ ಸಿಕ್ಕ ಶಾಪ. ಮೊದಲನೆಯದಾಗಿ, ಗಾಂಧಾರಿ ಕಥೆಯನ್ನು ನೋಡೋಣ..
ಕುರುಕ್ಷೇತ್ರ ಯುದ್ಧ ಮುಗಿದ ನಂತರ, ಪಾಂಡವರು ಹಸ್ತಿನಾಪುರಕ್ಕೆ ಮರಳಿ ಹೋಗಿದ್ದರ ಬಗ್ಗೆ ಸಂಜಯ ಬಂದು ಗಾಂಧಾರಿಗೆ ಹೇಳುತ್ತಾನೆ. ಆಗ ಗಾಂಧಾರಿ ದುಃಖಕ್ಕೆ ಒಳಗಾಗುತ್ತಾಳೆ, ತನ್ನ ಇಡೀ ವಂಶವೇ ನಾಶವಾಗಿದೆ ಎನ್ನುವ ನೋವು ಗಾಂಧಾರಿಗೆ. ನಂತರ ಶ್ರೀಕೃಷ್ಣ ದ್ವಾರಕಕ್ಕೆ ಹೋಗುತ್ತಾನೆ. ಅದರ ಜೊತೆಗೆ ಇದೆಲ್ಲದಕ್ಕೂ ಶ್ರೀಕೃಷ್ಣನೇ ಕಾರಣ ಎಂದು ಗೊತ್ತಾದ ಬಳಿಕ,  ಕೋಪಕ್ಕೆ ಒಳಗಾಗುವ ಗಾಂಧಾರಿ, ನನ್ನ ಕುರುವಂಶ ನಾಶವಾದ ಹಾಗೆ, ನಿನ್ನ ಕಣ್ಣೆದುರೇ ನಿನ್ನ ಯದುವಂಶ ಮತ್ತು ದ್ವಾರಕಾ ನಗರ ನಾಶವಾಗಿ ಹೋಗಲಿ ಎಂದು ಶ್ರೀಕೃಷ್ಣನಿಗೆ ಶಾಪ ನೀಡುತ್ತಾಳೆ. ಶ್ರೀಕೃಷ್ಣನು ಅದನ್ನು ಒಳ್ಳೆಯ ಮನಸ್ಸಿನಿಂದಲೇ ಸ್ವೀಕರಿಸುತ್ತಾನೆ.

ಇನ್ನು ಎರಡನೆಯ ಕಥೆ, ಶ್ರೀಕೃಷ್ಣನ ಮಗ ಶಂಭು ಮತ್ತು ಆತನ ಸ್ನೇಹಿತರು ದ್ವಾರಕಾದಲ್ಲಿ ಆಟವಾಡುತ್ತಾ ಇರುತ್ತಾರೆ, ಆಗ ವಿಶ್ವಾಮಿತ್ರ ಮತ್ತು ಇನ್ನಿತರ ಋಷಿಗಳು ದ್ವಾರಕಾ ನಗರಕ್ಕೆ ಬರುತ್ತಾರೆ. ಅವರನ್ನು ಗೋಲುಹಾಕಿಕೊಳ್ಳಬೇಕು ಎಂದು ಶಂಭು ಮತ್ತು ಅವನ ಮಿತ್ರರು ಮಾತನಾಡಿಕೊಳ್ಳುತ್ತಾರೆ, ಅವರೆಲ್ಲರೂ ಮದ್ಯಪಾನ ಸೇವಿಸಿದ್ದ ಕಾರಣ, ಶಂಭುವಿಗೆ ಹೆಣ್ಣಿನ ವೇಷ ಧರಿಸಿ ಶಂಭುವನ್ನು ಋಷಿಗಳ ಮುಂದೆ ಕರೆದುಕೊಂಡು ಹೋಗಿ, ಈ ಹೊಟ್ಟೆಯಿಂದ ಯಾವ ಮಗು ಜನಿಸುತ್ತದೆ ಎಂದು ತಮಾಷೆಯಾಗಿ ಕೇಳುತ್ತಾರೆ. ಇವರ ಉದ್ದೇಶ ಋಷಿಗಳಿಗೆ ತಿಳಿಯುತ್ತದೆ. ಅದರಿಂದ ಕೆಂಡಾಮಂಡಲವಾಗುವ ಋಷಿಗಳು, ಈ ಹೊಟ್ಟೆಯಲ್ಲಿ ಒಬ್ಬ ಹೇಡಿ ಹುಟ್ಟುತ್ತಾನೆ, ಅದಾದ ಬಳಿಕ ದ್ವಾರಕ ನಗರ ನೀರಿನಲ್ಲಿ ಮುಳುಗಿ ಹೋಗುತ್ತದೆ ಎಂದು ಶಾಪ ನೀಡುತ್ತಾರೆ. ಈ ಮಾತನ್ನು ಶ್ರೀಕೃಷ್ಣನಿಗೆ ಹೇಳಿದಾಗ, ಋಷಿಗಳ ಮಾತು ಸುಳ್ಳಾಗುವುದಿಲ್ಲ ಎಂದು ಶ್ರೀಕೃಷ್ಣನು ಹೇಳುತ್ತಾನೆ.

ಋಷಿಗಳ ಶಾಪ ವ್ಯರ್ಥವಾಗುವುದಿಲ್ಲ ಎಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಕುರುಕ್ಷೇತ್ರ ಯುದ್ಧ ನಡೆದ 36 ವರ್ಷಗಳ ನಂತರ, ದ್ವಾರಕಾ ನಗರದಲ್ಲಿ ಅಪಶಕುನಗಳ ಸಂಭವಿಸಲು ಶುರುವಾಗುತ್ತದೆ.  ಆಗ ಯದುವಂಶದವರು ತೀರ್ಥಯಾತ್ರೆಗೆ ಹೋಗಲು ಕಳಿಸುತ್ತಾರೆ. ಎಲ್ಲರೂ ತೀರ್ಥಯಾತ್ರೆಗೆ ಹೊರಟಾಗ ಅವರಲ್ಲಿ, ಸಣ್ಣದಾಗಿ ಶುರುವಾಗುವ ಜಗಳ ಮನಸ್ತಾಪ ಮುಂದೆ ದೊಡ್ಡದಾಗಿ ಯುದ್ಧದ ವರೆಗೂ ಮುಟ್ಟುತ್ತದೆ. ಋಷಿಗಳ ಶಾಪ ಇಲ್ಲಿ ನಿಜವಾಗುತ್ತಿದೆ. ಆ ಯುದ್ಧದಲ್ಲಿ ಶ್ರೀಕೃಷ್ಣನ ಮಗ ಪ್ರದ್ಯುಮ್ನ ಸಹ ಮರಣ ಹೊಂದುತ್ತಾನೆ. ಈ ಯುದ್ಧದಲ್ಲಿ ಉಳಿಯುವುದು ಶ್ರೀಕೃಷ್ಣ, ಬಲರಾಮ ಮತ್ತು ಶ್ರೀಕೃಷ್ಣನ ಸಾರಥಿ ಮಾತ್ರ. ಶ್ರೀಕೃಷ್ಣನು ತನ್ನ ಸಾರಥಿಯನ್ನು ಅರ್ಜುನನ ಬಳಿ ಕಳಿಸಿ, ಅರ್ಜುನನನ್ನು ಕರೆತರಲು ಹೇಳುತ್ತಾನೆ, ಬಲರಾಮನನ್ನು ಅಲ್ಲಿಯೇ ಇರಲು ಹೇಳಿ, ತಾನು ತನ್ನ ತಂದೆಗೆ ವಿಚಾರ ತಿಳಿಸಲು ದ್ವಾರಕಕ್ಕೆ ಹೋಗುತ್ತಾನೆ.

ತಂದೆಯ ಬಳಿ ಹೋಗುವ ಶ್ರೀಕೃಷ್ಣ, ಅರ್ಜುನ ಆದಷ್ಟು ಬೇಗ ಬರುತ್ತಾನೆ ಅಲ್ಲಿಯವರೆಗೂ ದ್ವಾರಕದ ಜನರನ್ನು ಹುಷಾರಾಗಿ ನೋಡಿಕೊಳ್ಳಿ ಎಂದು ವಸುದೇವನಿಗೆ ಹೇಳಿ, ಮತ್ತೆ ಬಲರಾಮ ಇದ್ದ ಕಡೆಗೆ ಬರುತ್ತಾನೆ. ಧ್ಯಾನವಸ್ಥೆಯಲ್ಲಿದ್ದ ಬಲರಾಮನ ಆತ್ಮ, ನಾಗಶೇಷನ ರೂಪದಲ್ಲಿ ಮುಳುಗಿ ಹೋಗುತ್ತದೆ, ಆಗ ಶ್ರೀಕೃಷ್ಣನು ಗಾಂಧಾರಿ ಕೊಟ್ಟ ಶಾಪದ ಬಗ್ಗೆ ಯೋಚಿಸಿ, ಸ್ವಲ್ಪ ವಿಶ್ರಾಂತಿ ಪಡೆಯಲು ಹೋಗುತ್ತಾನೆ. ಆ ಸಮಯದಲ್ಲಿ ಒಬ್ಬ ಬೇಟೆಗಾರ, ಜಿಂಕೆ ಎಂದುಕೊಂಡು ಬಿಡುವ ಬಾಣ ಶ್ರೀಕೃಷ್ಣನಿಗೆ ತಗಲುತ್ತದೆ. ಹತ್ತಿರ ಬಂದು ನೋಡಿ, ಶ್ರೀಕೃಷ್ಣ ಎಂದು ತಿಳಿದ ನಂತರ ಆತ ಕ್ಷಮೆ ಕೇಳುತ್ತಾನೆ, ಆತನ ಪರಿಸ್ಥಿತಿ ನೋಡಿ ಕ್ಷಮಿಸುವ ಶ್ರೀಕೃಷ್ಣ, ತನ್ನ  ದೇಹ ತ್ಯಾಗ ಮಾಡುತ್ತಾನೆ. ಬಳಿಕ ಆ ಬೇಟೆಗಾರ ಹಸ್ತಿನಾಪುರಕ್ಕೆ ಬಂದು ನಡೆದ ವಿಚಾರವನ್ನು ತಿಳಿಸುತ್ತಾನೆ. ನಂತರ ಅರ್ಜುನ ದ್ವಾರಕಾ ನಗರಕ್ಕೆ ಬರುತ್ತಾನೆ. ಅಲ್ಲಿನ ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಾನೆ ಅರ್ಜುನ.

ವಸುದೇವನು, ಶ್ರೀಕೃಷ್ಣ ನೀಡಿರುವ ಸಂದೇಶವನ್ನು ಅರ್ಜುನನಿಗೆ ತಿಳಿಸುತ್ತಾನೆ, ಕೆಲವೇ ಸಮಯದಲ್ಲಿ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ, ಆದಷ್ಟು ಬೇಗ ಅಲ್ಲಿನ ಜನರನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಹೇಳುತ್ತಾನೆ ವಸುದೇವ. ಆ ಮಾತು ಕೇಳಿದ ಅರ್ಜುನ, ಕೂಡಲೇ ಎಲ್ಲಾ ಮಂತ್ರಿಗಳನ್ನು ಕರೆಸಿ, ಆ ವಿಚಾರ ತಿಳಿಸಿ, ಜನರನ್ನು ಹಸ್ತಿನಾಪುರಕ್ಕೆ ಕರೆದೊಯ್ಯಲು ಬೇಕಾದ ಎಲ್ಲಾ ಏರ್ಪಾಡುಗಳನ್ನು ಮಾಡಬೇಕು ಎಂದು ತಿಳಿಸುತ್ತಾನೆ. ಎಲ್ಲಾ ಮಂತ್ರಿಗಳು ಏರ್ಪಾಡು ಮಾಡಲು ಶುರು ಮಾಡಿಕೊಳ್ಳುತ್ತಾರೆ. ಮರುದಿನ ಶ್ರೀಕೃಷ್ಣನ ತಂದೆ ವಸುದೇವ ಪ್ರಾಣ ತ್ಯಾಗ ಮಾಡುತ್ತಾರೆ., ನಂತರ ವಸುದೇವನ ಪತ್ನಿಯರು ರೋಹಿಣಿ,  ದೇವಕಿ ಮತ್ತು ಭದ್ರಾ ಮೂವರು ಸಹ ಪ್ರಾಣ ತ್ಯಾಗ ಮಾಡುತ್ತಾರೆ. ನಂತರ ಅರ್ಜುನ ಯದುವಂಶದ ಎಲ್ಲರ ಅಂತ್ಯಸಂಸ್ಕಾರವನ್ನು ಶಾಸ್ತ್ರಗಳ ಪ್ರಕಾರ ಮಾಡಿ, ಏಳನೆಯ ದಿನ ಜನರನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಹೋಗುತ್ತಾನೆ. ಅವರೆಲ್ಲ ಹೊರಟ ನಂತರ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಶ್ರೀಕೃಷ್ಣ ಪೋಷಿಸಿದ ನಗರ ಈ ರೀತಿ ಅಂತ್ಯವಾಗುತ್ತದೆ.

ದ್ವಾರಕಾ ನಗರ ನಿಜಕ್ಕೂ ಇತ್ತೇ ಎನ್ನುವುದನ್ನು ತಿಳಿಯಲು, ಈಗಾಗಲೇ ಆರ್ಕಿಯಾಲಜಿ ಡಿಪಾರ್ಟ್ಮೆಂಟ್, ರಿಸರ್ಚ್ ಇನ್ಸ್ಟಿಟ್ಯೂಟ್ ಗಳು ಪ್ರಯತ್ನ ಪಟ್ಟಿದ್ದು, ಅವರಿಗೆಲ್ಲಾ ಕೆಲವು ಪ್ರೂಫ್ ಗಳು ಸಿಕ್ಕಿವೆ. 5000 ವರ್ಷಗಳ ಹಿಂದೆ, ಕುರುಕ್ಷೇತ್ರ ಯುದ್ಧ ನಡೆದಿತ್ತು ಎಂದು ಹೇಳಲಾಗುತ್ತದೆ. ನಮ್ಮ ಹಿಂದೂ ಧರ್ಮ, ಗ್ರಂಥಗಳು ಮನುಷ್ಯ ಹೇಗೆ ಬದುಕಬೇಕು, ಮನುಷ್ಯನ ಜೀವಿತಾವಧಿ ಮುಗಿದ ಬಳಿಕ ಏನಾಗುತ್ತದೆ ಎನ್ನುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ. ಪ್ರಪಂಚದ ಪುರಾತನ ಸಂಸ್ಕೃತಿಗಳಲ್ಲಿ ನಮ್ಮ ಭಾರತ ಸಂಸ್ಕೃತಿ ಸಹ ಒಂದು. ದ್ವಾರಕಾ ನಗರದ ಕಥೆ ಇದಾಗಿದೆ.

Comments are closed.