ಚಾಮುಂಡಿ ಬೆಟ್ಟದ ಸಂರಕ್ಷಣೆಗೆ ಕೈ ಜೋಡಿಸಿದ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು ಗೊತ್ತೇ??

ಕರ್ನಾಟಕದ ಶ್ರೇಷ್ಠ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಮೈಸೂರಿನ ಚಾಮುಂಡಿ ಬೆಟ್ಟ. ದೇಶ ವಿದೇಶಗಳಿಂದ ಚಾಮುಂಡಿ ಬೆಟ್ಟ ನೋಡಲು ಜನರು ಮೈಸೂರಿಗೆ ಬರುತ್ತಾರೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯುತ್ತಾರೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಚರ್ಚೆ ಕೆಲವು ಸಮಯದಿಂದ ಕೇಳಿ ಬರುತ್ತಿದ್ದು, ಇದೀಗ ಮೈಸೂರಿನ ರಾಜಮಾತೆ ಪ್ರಮೋದಾದೇವಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ..

ಮಾಧ್ಯಮದ ಎದುರು ಮಾತನಾಡಿದ ಪ್ರಮೋದ ದೇವಿ ಅವರು, “ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡುವ ಅಗತ್ಯ ಇಲ್ಲ. ಮೈಸೂರು ನಗರದಿಂದ ಚಾಮುಂಡಿ ಬೆಟ್ಟ ತಲುಪಲು 20 ನಿಮಿಷ ಸಾಕು, ಪ್ರವಾಸೋದ್ಯಮ, ಆಧುನಿಕತೆ ದೃಷ್ಟಿಯಿಂದ ಚಾಮುಂಡಿ ಬೆಟ್ಟದ ಕಾಡಿನ ಸಂಪತ್ತನ್ನು ಸರ್ಕಾರ ನಾಶ ಮಾಡಬಾರದು. ರೋಪ್ ವೇ ನಿರ್ಮಾಣ ಮಾಡಲು ಸಾಕಷ್ಟು ಮರಗಳನ್ನು ಕಡಿಯಬೇಕು, ಆ ರೀತಿ ಮಾಡುವುದು ಬೇಡ. ಚಾಮುಂಡಿ ಬೆಟ್ಟಕ್ಕೆ ಆಧುನಿಕತೆ ತರುವುದು ಬೇಡ. ಮೊದಲೆಲ್ಲಾ ಬೆಟ್ಟದಲ್ಲಿ ಒಂದೆರಡು ಮನೆಗಳಷ್ಟೇ ಇದ್ದವು. ಈಗ ಮನೆಗಳು ಸಹ ಹೆಚ್ಚಾಗುತ್ತಿವೆ. ಚಾಮುಂಡಿ ಬೆಟ್ಟದಲ್ಲಿ ಗ್ರಾಮ ನಿರ್ಮಾಣವಾಗಿ, ನಗರ ಪ್ರದೇಶದ ಹಾಗೆ ಆಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು. ಬೆಟ್ಟಕ್ಕೆ ಕಮರ್ಷಿಯಲ್ ಮಳಿಗೆಗಳು ಸಹ ಬೇಕಾಗಿಲ್ಲ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕು..” ಎಂದಿದ್ದಾರೆ ರಾಜಮಾತೆ ಪ್ರಮೋದಾದೇವಿ ಅವರು..

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಮಾತುಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದು, ಇದಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ಸಹ ಮಾಡಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರತಿಭಟನೆ ನಡೆದಿತ್ತು. ಜನರು ಸಹ ರೋಪ್ ವೇ ನಿರ್ಮಾಣ ಮಾಡಿ, ಕಾಡನ್ನು ಹಾಳುಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.